ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿನ ಅರಮನೆ ಮುಂಭಾಗ ಪ್ರಧಾನಿ ಮೋದಿ ಯೋಗ ಮಾಡಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ. ರಾಜಮನೆತನದವರಿಗೆ ಆಹ್ವಾನ ಕೊಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ಕೊಟ್ಟಿದ್ದಾರೆ. ಗಣ್ಯರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಮೈಸೂರು ಮಹಾರಾಜರನ್ನು ಬಿಟ್ಟು ಕಾರ್ಯಕ್ರಮ ಎಂಬುದು ಗಾಳಿ ಸುದ್ದಿ. ಇದಕ್ಕೆ ಯಾರು ಕಿವಿ ಕೊಡಬೇಡಿ ಅಂದಿದ್ದಾರೆ. ಪ್ರಧಾನಿ ಜೊತೆ 15 ಸಾವಿರ ಜನ ಯೋಗ ಮಾಡಲಿ ದ್ದು, ಪ್ರಧಾನಿ ಜೊತೆ ವೇದಿಕೆ ಮೇಲೆ 5 ಜನರಿಗಷ್ಟೇ ಅವಕಾಶ ಸಿಗಲಿದೆ. ಕಾರ್ಯಕ್ರಮದಲ್ಲಿ ವಿವಾದಕ್ಕೆ ಅವಕಾಶ ಮಾಡಿಕೊಡದಂತೆ, ಸ್ಥಳೀಯ ನಾಯಕರು ತಮ್ಮ ಪ್ರತಿಷ್ಠೆ ಬಿಡುವಂತೆ ಹೈಕಮಾಂಡ್ ಸೂಚಿಸಿದೆ. ಜೂನ್ 21ರ ಬೆಳಗ್ಗೆ 6.30ಕ್ಕೆ ಯೋಗ ಆರಂಭವಾಗಲಿದ್ದು, ಇದಕ್ಕೂ ಮುನ್ನ 1 ಗಂಟೆ ಅಂದರೆ ಬೆಳಗ್ಗೆ 5.30ರೊಳಗೆ ನೊಂದಾಯಿತ ಯೋಗಪಟುಗಳು ಅರಮನೆ ಒಳಗೆ ಬರಬೇಕು. ಒಟ್ಟು 15 ಸಾವಿರ ಜನರಲ್ಲಿ 12 ಸಾವಿರ ಸ್ಥಳೀಯರು, 1 ಸಾವಿರ ವಿವಿಧ ರಾಜ್ಯಗಳ ಪ್ರತಿನಿಧಿಗಳು, 1 ಸಾವಿರ ಆಯುಷ್ ಇಲಾಖೆ ಹಾಗೂ ಕೇಂದ್ರದ ವಿವಿಧ ಇಲಾಖೆ ಅಧಿಕಾರಿಗಳು, 1 ಸಾವಿರ ಕೇಂದ್ರ ವೈದ್ಯಕೀಯ ವಿಭಾಗದ ಸಿಬ್ಬಂದಿ ಭಾಗವಹಿಸಲಿದ್ದಾರೆ. 12 ಸಾವಿರ ಸ್ಥಳೀಯರ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ಇದರಲ್ಲಿ ಪೌರ ಕಾರ್ಮಿಕರು, ಆಟೋ ಚಾಲಕರು, ತೃತೀಯ ಲಿಂಗಿಗಳು, ಯೋಗ ಒಕ್ಕೂಟಗಳಲ್ಲಿನ ಯೋಗ ಪಟುಗಳು, ರಾಜ್ಯ ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಪೊಲೀಸ್ ಇಲಾಖೆ ಹೀಗೆ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಳ್ಳಲಾಗಿದೆ.
#publictv #newscafe #hrranganath